ಯಾವ ದೀಪಗಳು ಹಿತ ಕೀಟಗಳಿಗೆ?

ಬಿರು ಬೇಸಗೆ ಕಳೆದು ಮೊದಲ ಮಳೆ ಭೂಮಿಯನ್ನು ತಣಿಸಿದ ಮರುದಿನವೇ ಒಂದು ವಿಚಿತ್ರ ಕಾಣುತ್ತೇವಷ್ಟೆ. ಸಂಜೆ ದೀಪ ಹೊತ್ತಿಸಿದ ಕೂಡಲೇ ದೀಪಕ್ಕೆ ಮುತ್ತಿಕೊಂಡು ಮುಸುಕು ಹಾಕಿಬಿಡುವ ಹಾರುವ ಇರುವೆಗಳ ಮೋಡ ಎಲ್ಲಿಂದಲೋ ಕಾಣಿಸಿಕೊಳ್ಳುತ್ತದೆ. ಮುಂಜಾವು ವಾಕಿಂಗ್ ಹೋಗುವಾಗ ಪಾರಿಜಾತ ಮರದ ಕೆಳಗೆ ಹೂಗಳು ಉದುರಿರುವುದನ್ನು ನೋಡುವುದರ ಜೊತೆಗೇ ದೀಪದ ಕಂಭದ ಕೆಳಗೆ ರೆಕ್ಕೆ ಇರುವೆಗಳ ಹಾಸನ್ನೂ ನೋಡುತ್ತೇವೆ. ಈ ಕೀಟಗಳು ದೀಪಗಳನ್ನು ಹುಡುಕಿಕೊಂಡು ಬಂದು ಸಾಯುವುದೇಕೆ ಎನ್ನುವ ಪ್ರಶ್ನೆ ಕೆಲವರ ಮನಸ್ಸಿನಲ್ಲಾದರೂ ಎದ್ದಿರಲೇ ಬೇಕು.

ಕೀಟಗಳಿಗೂ ದೀಪಗಳಿಗೂ ಅದೇನೋ ಅವಿನಾಭಾವ ಸಂಬಂಧ. ಬೆಂಕಿಗೆ ಮುತ್ತು ಕೊಟ್ಟ ಪತಂಗದ ಹಾಗೆ ಎಂದು ಕೇಳಿಲ್ಲವೇ? “ನಿಲ್ಲು ನಿಲ್ಲೇ ಪತಂಗ, ಬೇಡ,ಬೇಡ ಬೆಂಕಿಯ ಸಂಗ,” ಎಂದು ಕವಿ ಎಷ್ಟೇ ಹೇಳಿದರೂ ಪತಂಗ ನಿಲ್ಲದು. ಪತಂಗವಷ್ಟೆ ಅಲ್ಲ, ಹಲವು ಬಗೆಯ ಸೊಳ್ಳೆಗಳು, ನುಸಿ, ರೆಕ್ಕೆ ಬೆಳೆಸಿಕೊಂಡ ಗಂಡು ಇರುವೆಗಳು, ದುಂಬಿ, ನಾರುವ ದುಂಬಿ, ಹೆಸರೇ ಗೊತ್ತಿಲ್ಲದ ನೂರಾರು ಬಗೆಯ ಕೀಟಗಳನ್ನು ಕೃತಕ ಬೆಳಕು ಆಕರ್ಷಿಸುತ್ತದೆ.

Chrysocoris,_Hebbal,_Bangalore,_India_-_20060806

ಬೆಳಕಿನಿಂದ ಆಕರ್ಷಿತವಾಗುವ ಒಂದು ಕೀಟ.  ಇದಕ್ಕೆ ಕನ್ನಡದಲ್ಲಿ ಏನೆಂದು ಹೆಸರು? ಯಾರಿಗಾದರೂ ಗೊತ್ತೇ?

ಇದಕ್ಕೆ ನಿಜವಾದ ಕಾರಣವೇನೆಂದು ಹೇಳಲು ಸಾಧ್ಯವಾಗಿಲ್ಲ. ಗೊತ್ತಿರುವುದೆಲ್ಲ ಇಷ್ಟೆ. ಬಹುತೇಕ ಕೀಟಗಳು ದಿಕ್ಕು ಗುರುತಿಸಲು ಒಂದೋ ಸೂರ್ಯನ ಅಥವಾ ಚಂದ್ರನನ್ನು ಅನುಸರಿಸುತ್ತವೆ. ಇವುಗಳ ಕಣ್ಣು ಎಷ್ಟು ಸೂಕ್ಷ್ಮವೆಂದರೆ ಸೂರ್ಯನ ಬೆಳಕು ಇವುಗಳಿಗೆ ಬೇರೆಯದೇ ರೀತಿಯಲ್ಲಿ ಕಾಣುತ್ತದೆ. ಬೆಳಕಿನ ಅಲೆಗಳು ಕಂಪನ ಯಾವ ದಿಕ್ಕಿನಲ್ಲಿದೆ ಎನ್ನುವುದನ್ನು ಕೀಟಗಳ ಕಣ್ಣು ಕಾಣಬಲ್ಲದು. ಈ ಸಾಮರ್ಥ್ಯ ಮಾನವನ ಕಣ್ಣಿಗಿಲ್ಲ.  ಇದರ ಫಲ: ದಟ್ಟ ಮೋಡಗಳ ನಡುವೆ ಸೂರ್ಯ ಮರೆಯಾಗಿದ್ದರೂ ಬೆಳಕಿನ ಅಲೆಗಳ ಕಂಪನದ ದಿಕ್ಕನ್ನು ಗಮನಿಸಿ ಇವು ಸೂರ್ಯನಿರುವ ಎಡೆಯನ್ನು ಗುರುತಿಸಬಲ್ಲವು. ರಾತ್ರಿ ಚಟುವಟಿಕೆ ತೋರುವ ನಿಶಾಚರಿ ಕೀಟಗಳಿಗೆ ಚಂದ್ರನೇ ದಾರಿದೀಪ.

ಬೆಳಗಿನ ಹೊತ್ತು ಸೂರ್ಯನ ಪ್ರಖರ ಬೆಳಕಿನಿಂದಾಗಿ ನೀವು ಬೇರಾವುದೇ ದೀಪ ಹೊತ್ತಿಸಿಟ್ಟರೂ ಅದು ಮಂಕುದೀಪವಷ್ಟೆ! ಹೀಗಾಗಿ ಕೃತಕ ದೀಪಗಳಿಂದ ಕೀಟಗಳಿಗಾಗುವ ಗೊಂದಲ ನಮಗೆ ಬೆಳಗ್ಗಿನ ಹೊತ್ತು ಕಾಣುವುದಿಲ್ಲ. ರಾತ್ರಿ ದೀಪ ಹೊತ್ತಿಸಿದಾಗ ಅವನ್ನೇ ಚಂದ್ರನೆಂದು ಭ್ರಮಿಸಿ ಕೀಟಗಳು ಅತ್ತ ಹಾರಿ ಬರುತ್ತವೆ. ಇನ್ನು ರೆಕ್ಕೆ ಇರುವೆಯಂತಹ ಪ್ರಾಣಿಗಳ ಜೀವನವೇ ಕ್ಷಣಿಕ. ಅವು ಅನ್ನಾಹಾರ ಸೇವಿಸಲಾರವು. ದೇಹದಲ್ಲಿ ಕಸುವೆಷ್ಟಿದೆಯೋ ಅಷ್ಟೇ ಅವುಗಳ ಹಾರಾಟ.  ಕೃತಕ ಬೆಳಕಿನಿಂದಾಗಿ ಗೊಂದಲಗೊಂಡು ಅತ್ತ ಹಾರಿ ಬಂದ ಅವು ದಿಕ್ಕು ತಿಳಿಯದೇ ಅಲ್ಲಲ್ಲೇ ಗಿರಕಿ ಹೊಡೆಯುತ್ತವೆ. ಕಸುವುಗುಂದಿ ಕಾಲನ ವಶವಾಗುತ್ತವೆ. ದೀಪದ ಕಂಭದ ಕೆಳಗಿನ ಇರುವೆ ಹಾಸಿಗೆ ಇದೇ ಕಾರಣ.

ಅದೆಲ್ಲ ಸರಿ. ಈ ಹಿಂದೆ ಕೇವಲ ಬುಡ್ಡಿ ಬೆಳಕೋ, ಬಲ್ಬ್ ಬೆಳಕೋ ಇರುತ್ತಿತ್ತು. ಆದರೆ ಈಗ ಹಾಗಿಲ್ಲ. ಹತ್ತಾರು ಬಗೆಯ ದೀಪಗಳಿವೆ. ಪಾದರಸ, ಸೋಡಿಯಂ, ನಿಯಾನ್ ಅನಿಲಗಳಿರುವ, ಫ್ಲೂರೆಸೆಂಟ್ ದೀಪಗಳು, ನೂರು ವರ್ಷ ಹಳೆಯ ಬಲ್ಬ್ ದೀಪಗಳು, ಹತ್ತು ವರ್ಷಗಳ ಹಿಂದೆ ಜನಪ್ರಿಯವಾಗಿ ಅಷ್ಟೇ ಬೇಗನೆ ಮೂಲೆಗುಂಪಾಗುತ್ತಿರುವ ಸಿಎಫ್ ಎಲ್ ಗಳು ಹಾಗೂ ಇತ್ತೀಚೆಗೆ ಪ್ರಚಾರ ಪಡೆಯುತ್ತಿರುವ ಎಲ್ ಇ ಡಿ ಬಲ್ಬುಗಳು. ಇವೆಲ್ಲವೂ ಬೆಳಕನ್ನು ಸೂಸುವ ವಿಧಾನಗಳು ವಿಭಿನ್ನ. ಹಾಗೆಯೇ, ಇವುಗಳಿಂದ ಸೂಸುವ ಬೆಳಕಿನ ಗುಣಗಳೂ ವಿಭಿನ್ನ. ಬಲ್ಬು ಹಳದಿ ಬಣ್ಣ ಹೆಚ್ಚಿರುವ ಬೆಳಕನ್ನು ಸೂಸುತ್ತದೆ. ನಿಯಾನ್ ದೀಪಗಳು ಯಾವ ಬಣ್ಣವನ್ನು ಬೇಕಾದರೂ ಸೂಸಬಲ್ಲವು. ಸೋಡಿಯಂ ದೀಪಗಳು ತುಸು ಹೆಚ್ಚೇ ನೇರಳಾತೀತ ಕಿರಣಗಳನ್ನು ಚೆಲ್ಲುತ್ತವೆ. ಸಿಎಫ್ ಎಲ್ ಮತ್ತು ಎಲ್ ಇ ಡಿ ದೀಪಗಳು ಬೆಳಕಿನಲ್ಲಿ ನೀಲಿ ಬೆಳಕಿನ ಪ್ರಮಾಣ ಕಡಿಮೆ.  ಇದಲ್ಲದೆ ಕೀಟಗಳನ್ನು ಆಕರ್ಷಿಸುವುದೇ ಇಲ್ಲ ಎಂದು ಪ್ರಚಾರ ಪಡೆದ ‘ಬಗ್’ ದೀಪಗಳೂ ಮಾರುಕಟ್ಟೆಯಲ್ಲಿ ಇವೆ. ಇವುಗಳಲ್ಲಿ ಯಾವ ಬಲ್ಬು ಕೀಟಗಳನ್ನು ಆಕರ್ಷಿಸಬಲ್ಲದು? ಅಥವಾ ಎಲ್ಲ ದೀಪಗಳೂ ಒಂದೇ ರೀತಿಯಲ್ಲಿ ಕೀಟಗಳನ್ನು ಆಕರ್ಷಿಸುತ್ತವೆಯೋ?

Earwig_Dermaptera_unidentified_2014_04_06_5259.jpg

ಎಲ್ ಇ ಡಿ ಬಲ್ಬುಗಳು ಇದನ್ನು ಆಕರ್ಷಿಸುವುದು ಕಡಿಮೆ. ಇದರ ಹೆಸರೇನಿರಬಹುದು?

ಇದು ಕೌತುಕದ ಪ್ರಶ್ನೆ. ಮೊನ್ನೆ ಅಮೆರಿಕೆಯ ಅಸೋಸಿಯೇಷನ್ ಫಾರ್ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್ ನ ಸಭೆಯಲ್ಲಿ ಹೀಗೊಂದು ಪ್ರಶ್ನೆಗೆ ಉತ್ತರ ಹುಡುಕುವ ಸಂಶೋಧನೆಯ ವಿವರಗಳ ಬಗ್ಗೆ ಚರ್ಚೆ ಯಾಯಿತು. ಮೈಖೇಲ್ ಜಸ್ಟಿಸ್ ಎನ್ನುವ ಕೀಟತಜ್ಞ ಬೇಸಗೆಯ ತಿಂಗಳಲ್ಲಿ ಪ್ರತಿದಿನ ರಾತ್ರಿ ಕೀಟಗಳನ್ನು ಸಂಗ್ರಹಿಸಿದ. ಆರು ಬಗೆಯ ದೀಪಗಳನ್ನು ಬೇರೆ, ಬೇರೆಡೆ ಹೊತ್ತಿಸಿಟ್ಟ. ಈ ದೀಪಗಳ ಬಳಿ ಬಂದ ಕೀಟಗಳು ಜಾರಿ ಬೀಳುವಂತೆ ಈತನ ಸಾಧನವಿತ್ತು. ಇದರಲ್ಲಿ ಬಿದ್ದ ಕೀಟಗಳ ಬಗೆ ಹಾಗೂ ಸಂಖ್ಯೆಯನ್ನು ಲೆಕ್ಕ ಹಾಕಿ, ಎಂತಹ ಕೀಟಗಳು ದೀಪಗಳ ಬಳಿಗೆ ಹೆಚ್ಚು ಬರುತ್ತವೆ. ಯಾವ ದೀಪದ ಬಳಿ ಹೆಚ್ಚು ಕೀಟಗಳು ಬರುತ್ತವೆ ಎಂದು ಲೆಕ್ಕ ಹಾಕಿದ.

ಫಲಿತಾಂಶ: ಬಲ್ಬ್ ದೀಪಗಳು ಅತಿ ಹೆಚ್ಚಿನ ಕೀಟಗಳನ್ನು ಆಕರ್ಷಿಸಿದುವು. ಕೀಟಗಳನ್ನು ಆಕರ್ಷಿಸುವುದೇ ಇಲ್ಲ ಎಂದು ಪ್ರಚಾರ ಪಡೆದ ‘ಬಗ್’ ದೀಪಗಳಿಗೆ ಎರಡನೆಯ ಸ್ಥಾನ! ಕೊನೆಯ ಸ್ಥಾನ: ಎಲ್ ಇ ಡಿ ಬಲ್ಬುಗಳದ್ದು. ಬಹುಶಃ ಎಲ್ ಇ ಡಿ ಬಲ್ಬುಗಳು ಸೂಸುವ ಬೆಳಕಿನ ಗುಣ ಕೀಟಗಳಿಗೆ ಇಷ್ಟವಾಗದಿರಬಹುದು ಎನ್ನುವುದು ಜಸ್ಟಿಸ್ ನ ತರ್ಕ. ‘ಬಗ್’ ದೀಪಗಳಂತೂ ಬೇರೆಲ್ಲ ಬಲ್ಬ್ ಗಳಿಗಿಂತಲೂ ಹೆಚ್ಚು ಕೆಲವು ಬಗೆಯ ಕೀಟಗಳನ್ನು ಆಕರ್ಷಿಸುತ್ತಿದ್ದುವು. ಹಾಗೆಯೇ ಕಚ್ಚಿ ನೋವುಂಟು ಮಾಡುವ “ಇಯರ್ ವಿಗ್” ನಂತಹ ಕೀಟಗಳನ್ನೂ ಇವು ಹೆಚ್ಚು ಸೆಳೆದುವು.

ಅಂದರೆ ಇನ್ನು ಮನೆಯ ಮುಂದೆ, ಓದುವ ಜಾಗದಲ್ಲಿ ಅಥವಾ ಎಲ್ಲಿ ಕೀಟಗಳ ಬಾಧೆ ಬೇಡವೆನ್ನಿಸುತ್ತದೆಯೋ ಅಲ್ಲಿ ಎಲ್ ಇ ಡಿ ದೀಪಗಳನ್ನು ಹಾಕುವುದು ಒಳ್ಳೆಯದು ಎನ್ನೋಣವೇ? ಅಥವಾ ಇದು ಕೇವಲ ಅಮೆರಿಕೆಯ ಕೀಟಗಳಿಗಷ್ಟೆ ನಿಜವೋ? ನಮ್ಮೂರ ಕೀಟಗಳ ಆಯ್ಕೆ ಬೇರೆ ಇರಬಹುದೋ?

ಆಕರ: http://www.aaas.org/abstract/light-pollution-and-insects-insect-attraction-various-types-residential-lights?_ga=1.24804538.1671817005.1396291853

 

Published in: on ಫೆಬ್ರವರಿ 19, 2016 at 4:55 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2016/02/19/%e0%b2%af%e0%b2%be%e0%b2%b5-%e0%b2%a6%e0%b3%80%e0%b2%aa%e0%b2%97%e0%b2%b3%e0%b3%81-%e0%b2%b9%e0%b2%bf%e0%b2%a4-%e0%b2%95%e0%b3%80%e0%b2%9f%e0%b2%97%e0%b2%b3%e0%b2%bf%e0%b2%97%e0%b3%86/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: